ಬೈನಾಕ್ಯುಲರ್ -
	ದೂರದ ವಸ್ತುಗಳ ಲಂಬಿತ ಮತ್ತು ಸಮೀಪ ದೃಶ್ಯ ಉಂಟುಮಾಡುವಂತೆ, ಎರಡೂ ಕಣ್ಣುಗಳ ಮೂಲಕ ನೋಡಲು ಸಾಧ್ಯವಾಗುವಂತೆ ರಚಿತವಾಗಿರುವ ದೃಗುಪಕರಣ. ದುರ್ಬೀನು ಪರ್ಯಾಯನಾಮ. ವಸ್ತುವಿನ ದಪ್ಪ, ಆಳ ಮುಂತಾದವುಗಳ ಪರಿವೆ ಮತ್ತು ಘನರೂಪ ಗ್ರಹಿಕೆಯ ಅನುಭವ ಉಂಟು ಮಾಡುವುದು ಇದರ ವೈಶಿಷ್ಟ್ಯ.

	ಘನರೂಪಗ್ರಹಿಕೆಯ ತತ್ತ್ವ (ಸ್ಟಿಯರಿಯೊಸ್ಕೋಪಿಕ್ ಪ್ರಿನ್ಸಿಪಲ್) ಆಧರಿಸಿ ರಚಿತವಾಗಿರುವ ಘನರೂಪದರ್ಶಕವನ್ನು (ಸ್ಟಿಯರಿಯಾಸ್ಕೋಪ್) ಹೋಲುವಂತೆ ಇರುವ ಬೈನಾಕ್ಯುಲರಿನಲ್ಲಿ ಎರಡು ಚಿಕ್ಕ ಚಿಕ್ಕ ಭೌಮಿಕ ದೂರದರ್ಶಕಗಳು ಒಂದರ ಪಕ್ಕದಲ್ಲೊಂದು ಯುಕ್ತ ಅಂತರದಲ್ಲಿ ಇವೆ. ಇವೆರಡನ್ನೂ ಒಂದು ಪಕ್ಕದಲ್ಲೊಂದು ಅವುಗಳ ದೃಗಕ್ಷಗಳ ನಡುವಿನ ಅಗಲ 6.5 ಸೆಂಟಿಮೀಟರ್ ಇರುವಂತೆ ಅಳವಡಿಸಿದೆ (ಸಾಮಾನ್ಯವಾಗಿ ವ್ಯಕ್ತಿಯ ಎರಡೂ ಕಣ್ಣುಗಳ ನಡುವಿನ ಅಂತರ ಅಷ್ಟೆ.) ಈ ಎರಡೂ ದೂರದರ್ಶಕಗಳನ್ನು ಬಂಧಿಸುವ ಏರ್ಪಾಡೂ ಉಂಟು. ಈ ಬಂಧಕ ಬಾಹುವಿನಲ್ಲಿಯ ತಿರುಪಿನ ಉರುಳೆಯಿಂದ ದೂರದರ್ಶಕಗಳ ನೇತ್ರ ಮಸೂರಗಳನ್ನು ಏಕಕಾಲಕ್ಕೆ ಹಿಂದಕ್ಕೂ ಮುಂದಕ್ಕೂ ಚಲಿಸುವಂತೆ ಮಾಡಲು ಸಾಧ್ಯ. ಇದಲ್ಲದೆ ದೂರದರ್ಶಕಗಳ ನೇತ್ರ ಮಸೂರಗಳನ್ನು ಬಳಸುವಾತನ ದೃಷ್ಟಿಗೆ ಅನುಗುಣವಾಗಿ, ವಸ್ತುವಿನ ದೃಶ್ಯ ಸ್ಪುಟವಾಗಿ ಕಾಣುವಂತೆ ಪ್ರತ್ಯೇಕ ಪ್ರತ್ಯೇಕವಾಗಿಯೂ ನಾಭೀಕರಿಸಿಕೊಳ್ಳುವ (ಫೋಕಸಿಂಗ್) ಏರ್ಪಾಡೂ ಇದೆ. ಪ್ರತಿಯೊಂದು ದೂರದರ್ಶಕದ ಪೀನ ವಸ್ತು ಮಸೂರದ (ಕಾನ್ವೆಕ್ಸ್ ಆಬ್ಜೆಕ್ಟಿವ್) ಮೂಲಕ ಹಾದು ಬರುವ ಬೆಳಕಿನ ಕಿರಣ, ಆ ದೂರದರ್ಶಕದ ನಿಮ್ನ ನೇತ್ರ ಮಸೂರದ (ಕಾನ್‍ಕೇವ್ ಐಪೀಸ್) ಮೂಲಕ ಹಾದು ವೀಕ್ಷಕನ ಅಕ್ಷಿಪಟದ ಮೇಲೆ ಲಂಬಿತ ದೃಶ್ಯ ಮೂಡಿಸುತ್ತದೆ. ಮಿದುಳಿನಲ್ಲಿ ಆಗುವ ಬಿಂಬ ಮಿಲನದ (ಇಮೆಜ್ ಫ್ಯೂಷನ್) ಕಾರ್ಯಚಟುವಟಿಕೆಗಳಿಂದಾಗಿ ಮೂಡುವ ಎರಡೂ ಬಿಂಬಗಳು ಒಂದೇ ಆಗಿ ವಸ್ತುವಿನ ನೈಜಸ್ವರೂಪ ಗ್ರಹಿಕೆಯಾಗುತ್ತದೆ. ಬೈನಾಕ್ಯುಲರಿನ ಪ್ರತಿಯೊಂದು ದೂರದರ್ಶಕವೂ ಗೆಲಿಲಿಯನ್ ಪ್ರರೂಪದ್ದೇ.

	ಬೈನಾಕ್ಯುಲರ್ ನಡೆಸುವ ಕಾರ್ಯಗಳು ಎರಡು: ದೂರವಸ್ತುಗಳು ಹತ್ತಿರ ಬಂದಿವೆಯೋ ಮತ್ತು ದೊಡ್ಡದಾಗಿಯೋ ಎಂಬಂತೆ ಮಾಡುವುದು ಮತ್ತು ಈ ದೃಶ್ಯವನ್ನು ಸ್ಫುಟಗೊಳಿಸುವುದು. ಇವೆರಡೂ ಯುಕ್ತ ರೀತಿಯಲ್ಲಿ ಆಗಬೇಕಾದರೆ ಉಪಕರಣದ ಸಾಮಥ್ರ್ಯ ಅಧಿಕವಾಗಬೇಕು. ಎರಡು ಬಗೆಯ ಸಾಮಥ್ರ್ಯಉಂಟು; ಲಂಬನ ಸಾಮಥ್ರ್ಯ (ಮ್ಯಾಗ್ನಿಫ್ಯೆಯಿಂಗ್ ಪವರ್) ಮತ್ತು ವಿಘಟನ ಸಾಮಥ್ರ್ಯ (ರಿಸಾಲ್ವಿಂಗ್ ಪವರ್). ಸಾಮಾನ್ಯವಾಗಿ ಬೈನಾಕ್ಯುಲರಿನ ಮೇಲೆ ತಯಾರಕರು 6x30, 7x50, 8x30, 10x60  ಎಂದು ಮುಂತಾಗಿ ಗುರುತುಮಾಡಿರುತ್ತಾರೆ. ಇವುಗಳ ಮೊದಲಭಾಗ ಅಂದರೆ 6x, 8x, ಇತ್ಯಾದಿ ಬೈನಾಕ್ಯುಲರ್ ವಸ್ತುವನ್ನು ಎಷ್ಟು ಪಟ್ಟು ಲಂಬಿಸಬಲ್ಲದು ಅಂದರೆ ಅದರ ಲಂಬನ ಸಾಮಥ್ರ್ಯವನ್ನೂ ಎರಡನೆಯ ಭಾಗ ಅಂದರೆ 30, 50 ಇತ್ಯಾದಿ ಉಪಕರಣದಲ್ಲಿರುವ ದೂರದರ್ಶಕಗಳ ವಸ್ತು ಮಸೂರದ ವ್ಯಾಸವನ್ನೂ (ಮಿಲಿ ಮೀಟರುಗಳಲ್ಲಿ) ಸೂಚಿಸುತ್ತವೆ. ನೇತ್ರ ಮಸೂರಗಳ ನಾಭೀದೂರ ಕಡಿಮೆ ಆದಾಗ ಇಲ್ಲವೇ ವಸ್ತು ಮಸೂರದ ನಾಭೀದೂರ ಹೆಚ್ಚಾದಾಗ ಬೈನಾಕ್ಯುಲರಿನ ಲಂಬನ ಸಾಮಥ್ರ್ಯವೂ ವಸ್ತು ಮಸೂರಗಳ ವ್ಯಾಸ ಹೆಚ್ಚಿದಂತೆಲ್ಲ ಅದರ ವಿಘಟನ ಸಾಮಥ್ರ್ಯವೂ ಹೆಚ್ಚುತ್ತವೆ.

	ಅಶ್ರಕಗಳನ್ನು (ಪ್ರಿಸಮ್ಸ್) ಬಳಸಿಯೂ ಬೈನಾಕ್ಯುಲರನ್ನು ರಚಿಸುವುದಿದೆ. ಇದಕ್ಕೆ ಅಶ್ರಕೀಯ (ಪ್ರಿಸ್‍ಮ್ಸ್) ಬಳಸಿಯೂ ಬೈನಾಕ್ಯುಲರನ್ನು ರಚಿಸುವುದೆ. ಇದಕ್ಕೆ ಅಶ್ರಕೀಯ (ಪ್ರಿಸ್‍ಮ್ಯಾಟಿಕ್) ಬೈನಾಕ್ಯುಲರ್ ಎಂದು ಹೆಸರು. ಲಂಬ ಕೋನ ಮಸೂರಗಳೆರಡರ ಪೈಕಿ ಒಂದನ್ನು ವಸ್ತು ಮಸೂರದ ಹಿಂದೆಯೂ ಇನ್ನೊಂದನ್ನು ನೇತ್ರಮಸೂರದ ಮುಂದೆಯೋ ಜೋಡಿಸಿರುತ್ತಾರೆ. ವಸ್ತುವಿನಿಂದ ಹೊರಟ ಬೆಳಕು ವಸ್ತು ಮಸೂರವನ್ನು ಪ್ರವೇಶಿಸಿ, ವಸ್ತು ಅಶ್ರಕದ ಮೂಲಕ ಹಾದು ಅನಂತರ ನೇತ್ರ ಅಶ್ರಕ ಮತ್ತು ನೇತ್ರಮಸೂರಗಳ ಮೂಲಕವಾಗಿ ಕಣ್ಣುಗಳನ್ನು ತಲುಪುತ್ತದೆ.  ಮುಂದೆ ವಸ್ತುವಿನ ಬಿಂಬರಚನೆ, ಮಿಲನವಾಗಿ ಕಣ್ಣುಗಳು ನಡೆದು, ವಸ್ತುವಿನ ಲಂಬಿತ ಹಾಗೂ ಸ್ಫುಟದೃಶ್ಯದ ಅನುಭವ ಆಗುತ್ತದೆ.  ಗೆಲಿಲಿಯನ್ ಪ್ರರೂಪದ ಬೈನಾಕ್ಯುಲರಿನಲ್ಲಿ ಅಧಿಕ ಲಂಬಿತ ಸಾಮಥ್ರ್ಯ ಪಡೆಯಲು ಅಧಿಕ ನಾಭೀದೂರವಿರುವ ವಸ್ತು ಮಸೂರ ಹೊಂದಿಸಬೇಕು.  ಇದರಿಂದ ಬೈನಾಕ್ಯುಲರಿನ ದೂರದರ್ಶಕಗಳ ಕೊಳವೆಗಳ ಉದ್ದವೂ ಹೆಚ್ಚುತ್ತದೆ. ಅಲ್ಪನಾಭೀದೂರದ ವಸ್ತು ಮಸೂರಗಳ ಜೊತೆಗೆ ಆಶ್ರಕ ವ್ಯವಸ್ಧೆ ಏರ್ಪಡಿಸಿ ಅನಗತ್ಯ ಯಾಂತ್ರಿಕಾಂಶದ ತೊಂದರೆ ನಿವಾರಿಸಿಕೊಳ್ಳಬಹುದು. ವ್ಯಕ್ತಿಯ ಕಣ್ಣಿನ ನಡುವಿನ ಪ್ರಸಾಮನ್ಯ ಅಂತರ (6.5 ಸೆಂಟಿಮೀಟರ್) ಕೆಲವರಲ್ಲಿ ಹೆಚ್ಚು ಕಡಿಮೆ ಆಗುವುದುಂಟು. ಇದನ್ನು ಸರಿಹೊಂದಿಸಿಕೊಳ್ಳಲೂ ಆಶ್ರಕೀಯ ಬೈನಾಕ್ಯುಲರಿನಲ್ಲಿ ಯುಕ್ತ ಏರ್ಪಾಡು ಇರುತ್ತದೆ.
(ಬಿ.ಎಲ್.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ